ಅಂಗರಿಕೆ ಮಾಳ
ಕೃಷಿ ಜೀವ ವೈವಿಧ್ಯ ಮತ್ತು ಸಂರಕ್ಷಣೆಯ ಪ್ರಾತ್ಯಕ್ಷಿಕಾ ಸ್ಥಳಭೂಮಿಯಲ್ಲಿ ಕೆಲಸ ನಿರಂತರವಾಗಿ ನಡೆಯುತ್ತಿದ್ದು; ಮಣ್ಣಿನಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಪ್ರಗತಿ ಬಗ್ಗೆ ದಾಖಲು ಮಾಡಲಾಗುತ್ತಿದೆ. ಭೂಮಿಯಲ್ಲಿ ಬದುಗಳ ನಿರ್ಮಾಣದ ಕೆಲಸಗಳು, ಗಿಡ-ಮರಗಳನ್ನು ಹಾಕುವುದು, ಪ್ರತಿ ವರ್ಷ ಎರಡು ಸಲ ಕೃಷಿ ಮಾಡಲಾಗುತ್ತಿದೆ. ಭೂಮಿಯಲ್ಲಿ ಬೆಳೆಯುವ ಆಹಾರದ ಬೆಳಗಳು ಮತ್ತು ಗಿಡ-ಮರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬೀಳುತ್ತಿಲ್ಲ ಮತ್ತು ಬೇರೆ ನೀರಿನ ಮೂಲಗಳು ಇಲ್ಲದಿರುವುದರಿಂದ ಬೆಳೆ ಬೆಳೆಯುವುದು ಕಷ್ಟವಾಗುತ್ತಿದೆ. ಪೂರ್ವ ಮುಂಗಾರು ಮಳೆ ಬಿದಿದ್ದರಿಂದ ಭೂಮಿಯಲ್ಲಿ ಮರಗಿಡಗಳು ಹಸಿರಿನಿಂದ ಕೂಡಿದ್ದು, ಕಾಡು ಹೂಗಳು ಅರಳಿದ್ದು, ಬಳ್ಳಿಗಳು ತಮ್ಮ ಇರುವಿಕೆಯನ್ನು ಪ್ರತಿಬಿಂಬಿಸುತ್ತಿವೆ. ಆದರೆ ಮತ್ತೇ ಮಳೆ ಬೀಳುವುದು ನಿಂತಿದ್ದರಿಂದ ಬೆಳೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗಿವೆ. ಹವಮಾನ ಕುರಿತು ಮಾಹಿತಿ ವಿಶ್ಲೇಷಣೆ ಮಾಡುತ್ತಿದ್ದು ಮತ್ತು ಅಂಗರಿಕೆ ಮಾಳವನ್ನು ಸುಸ್ಥಿರ ಪರಿಸರ ನಿರ್ಮಾಣ ಮತ್ತು ಆರ್ಥಿಕವಾಗಿ ಬಾಳಿಕೆ ಇರುವಂತಹ ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದು ಹೇಗೆ ಎಂಬುದರ ಬಗ್ಗೆ ಚಿಂತಿಸಲಾಗುತ್ತಿದೆ.
೨೦೨೦
ಕಳೆದ ೫ ವರ್ಷಗಳಲ್ಲಿ ಅಂಗರಿಕೆ ಮಾಳದಲ್ಲಿ ಕೈಗೊಂಡ ಪುನಶ್ಚೇತನ ಮತ್ತು ಸಂರಕ್ಷಣೆ ಕೆಲಸದಿಂದ ಸಾಕಷ್ಟು ಬದಲಾವಣೆಗಳಾಗಿವೆ. ಈ ವರ್ಷ ಸಾಧಾರಣಾ ಮಳೆಯಿಂದಾಗಿ ಭೂಮಿಯಲ್ಲಿ ಹೊಸದಾಗಿ ಅಣಬೆಗಳು, ವಿವಿಧ ರೀತಿಯ ಬಳ್ಳಿಗಳು, ಹೂಗಳು, ಪೊದೆಗಳು ಮತ್ತು ಹಲವು ರೀತಿಯ ಹುಲ್ಲುಗಳು ಕಾಣಿಸಿಕೊಂಡಿವೆ. ಬೇವಿನ ಮರದಲ್ಲಿ ಕಟ್ಟಿದ್ದ ಗೀಜಗದ ಗೂಡು ಮತ್ತು ಜೇನಿನ ಗೂಡು ವಿಶೇಷವಾಗಿತ್ತು. ಭೂಮಿ ತನ್ನಾರೆ ಪುನಶ್ಚೇತನಗೊಳ್ಳುತ್ತಿದ್ದು, ಸ್ಥಳೀಯ ವೈವಿಧ್ಯತೆ ಕಾಣಿಸುತ್ತಿದ್ದು, ನಮ್ಮನ್ನು ಪ್ರೋತ್ಸಾಹಿಸುತ್ತಿದೆ. ಹಣ್ಣಿನ ಮರಗಳಾದ ಸಪೋಟಾ, ದಾಳಿಂಬೆ, ಪಪ್ಪಾಯ, ಫ್ಯಾಷನ್ ಪ್ರೂಟ್ಸ್ ಮತ್ತು ಹಿರಳೆಕಾಯಿ ಸ್ವಲ್ಪ ಪ್ರಮಾಣದಲ್ಲಿ ಫಲ ನೀಡಲು ಆರಂಭಿಸಿದ್ದು, ಖುಷಿ ನೀಡಿದೆ.
ಐಎಲ್‌ಪಿ ಕಲಿಕಾರ್ಥಿಗಳ ಭೇಟಿ”
ಸಮಗ್ರ ಕಲಿಕಾ ತರಬೇತಿ ಪಡೆದ ಒಕ್ಕೂಟದ ಸದಸ್ಯರನ್ನು ಭೂಮಿಗೆ ಕರೆದುಕೊಂಡು ಹೋಗಿದ್ದು, ಅವರು ಭೂಮಿಯಲ್ಲಿನ ಬದಲಾವಣೆಗಳನ್ನು ನೋಡಿ ತುಂಬಾ ಖುಷಿಪಟ್ಟರು. ಕಾಡಿನ ವಿಭಾಗದಲ್ಲಿ ಅವರನ್ನೆಲ್ಲಾ ಒಳಗೊಂಡಂತೆ ಒಂದು ಸಣ್ಣ ವಿಡಿಯೋ ತೆಗೆಯಲಾಗಿದೆ. ಆ ಪ್ರದೇಶದಲ್ಲಿ ಈಗ ತುಂಬಾ ಹುಲ್ಲು, ಪೊದೆಗಳು, ಮರಗಳು ಮತ್ತು ವಿವಿಧ ರೀತಿಯ ಚಿಟ್ಟೆಗಳು, ಪಕ್ಷಿಗಳು, ಮೊಲಗಳು ಮತ್ತು ಆಗಾಗ ಬಂದು ಹೋಗುವ ಕಾಡು ಹಂದಿಗಳು ಕಾಣಿಸಿಕೊಂಡಿವೆ.